Friday, July 9, 2010

ಪ್ರೀತಿಯ ಗೆಳತಿಗೆ ಕೊನೆಯ ಪ್ರೇಮ ಪತ್ರ

ಜೀವನದ ಪಯಣದಲಿ ಯಾವುದೋ ಒಂದು ನಿಲ್ದಾಣದಲಿ ಸಿಕ್ಕವಳು ನೀನು. ಸಿಕ್ಕ ಹಾಗೇ ಇಳಿದು ಹೋಗುವೆ ಅಂತ ನನಗೆ ಗೊತ್ತಿರಲಿಲ್ಲ. ಆದರೂ ಇಳಿದುಹೋಗುತ್ತಿರುವೆ, ಆದರೆ ನೀನು ಉಳಿಸಿಹೋದ ನೆನಪುಗಳು, ಕೆರಳಿಸಿಹೋದ ಭಾವನೆಗಳು ನನ್ನ ಸುಮ್ಮನೇ ಬಿಟ್ಟಾವೇ..!! No chance. ನೀನು ಮದುವೆಯ ಮುಂದಿನ ನಿಲ್ದಾಣದಲ್ಲಿ ಇಳಿದು ಹೋಗುವೆ ಎಂದು ತಿಳಿದಾಗಿನಿಂದ, ನಾನು ನಾನಾಗಿಲ್ಲ. ಬಾಲ್ಯದಲ್ಲಿ ತಾಯಿಯನ್ನು ಬಿಟ್ಟು ಶಾಲೆಗೆ ಹೋಗಲಾರದೇ ಅಳುವ ಕಂದನ ಹಾಗೇ, ತುಂಬಾ ಜತನದಿಂದ ಕಾಪಾಡಿಕೊಂಡಿದ್ದ ವಸ್ತು ಕಳೆದುಹೋದಾಗ ಆಗುವ ಯಾತನೆಯ ಹಾಗೇ, ಅನುಭವಿಸಲೂ ಆಗದೇ, ಮರೆಯಲೂ ಆಗದೇ ಒದ್ದಾಡುತ್ತಿರುವ ನನ್ನ ಮನದ ಅಳು ನೀನೋಮ್ಮೆ ಕೇಳಬೇಕು ಕಣೇ. ಆ ಅಳು ನಿನಗೆ ಅಳು ತರಿಸದೆ ಇರಬಹುದು, ನನ್ನ ಬಗ್ಗೆ ಪ್ರೀತಿ ಹೆಚ್ಚಿಸದೇ ಹೋಗಬಹುದು ಆದರೆ ಖಂಡಿತ ನನ್ನ ಪ್ರೀತಿಯ ಆಳ ನಿನಗೆ ತಿಳಿಸಿಯೇ ತಿಳಿಸುತ್ತೆ.

ನನ್ನ ಬದುಕಿನೊಳಗೆ ನೀ ಬಂದ ಘಳಿಗೆ ನನಗರಿವಿರಲಿಲ್ಲ , ನೀನು ನನ್ನ ಉಸಿರಾಗುವೆ ಎಂದು. ಅಕಾಲದಲ್ಲಿ ಮಳೆ ಬಂದ ಹಾಗೆ ನಿರೀಕ್ಷೆಯೇ ಇಲ್ಲದ ಹೊತ್ತಲಿ ನೀನು ನನ್ನ ಬದುಕೊಳಗೆ ಸಲೀಸಾಗಿ ನಡೆದುಬಂದೆ, ಅಲ್ಲಿವರೆಗೂ ಸಲೀಸಾಗಿದ್ದ ನನ್ನ ಬದುಕು ನಿನ್ನ ನೆನಪಲಿ ಮತ್ತೊಂದು ಮಜಲಿಗೆ ಮಗ್ಗಲು ಬದಲಾಯಿಸಿಬಿಟ್ಟಿತು. ಅಲ್ಲಿಂದ ನಮ್ಮಿಬ್ಬರ ನಡುವೆ ಸಾಗಿದ್ದು ಬರೀ ಮಾತು ಮತ್ತು ಪ್ರೇಮದ ಗಮ್ಮತ್ತು. ಇವತ್ತಿಗೂ ನನಗೆ ಆಶ್ಚರ್ಯವಾಗೋದು ಯಾಕೆ ಗೊತ್ತಾ..? ಇದುವರೆಗೂ ನನ್ನ ನಿನ್ನ ಪ್ರೇಮಗೀತೆಯಲಿ ಒಂದೇ ಒಂದು ಅಪಸ್ವರವೇಳದಿರುವುದು! ಸಾಮಾನ್ಯವಾಗಿ ಎಲ್ಲ ಪ್ರೇಮಿಗಳ ಮಧ್ಯೆ ಬರೋ ವಿಲನ್ಸ್ ಗಳಾಗಲೀ, ಆಸ್ತಿ-ಅಂತಸ್ತಾಗಲಿ, ಮತ್ತೂ ಉತ್ತಮ ಸಂಗಾತಿ ಸಿಗಬಹುದಿತ್ತು ಎಂಬಂತಹ ಯೋಚನೆಯಾಗಲಿ, ನಮ್ಮೀರ್ವರ ನಡುವೆ ಬಾರದಿರುವುದು!! ಎಂತಹ ಅನ್ಯೋನ್ಯವಾಗಿತ್ತು ಅಲ್ವಾ ನಮ್ಮ ಪ್ರೇಮ?

ಬಹುಶಃ ದೇವರಿಗೆ ಅದೇ ಕಾರಣಕ್ಕೆ ನಮ್ಮ ಮೇಲೆ ಕಿಬ್ಬೊಟ್ಟೆಯ ಸಂಕಟ ಎದುರಾದ ಹಾಗೆ ಆಗಿದೆ. ಅಪಸ್ವರವಿಲ್ಲದ ನಮ್ಮ ಪ್ರೇಮಗೀತೆಗೆ ವಿರಹದ ಚರಣ ಬರೆಯಲು ಹೊರಟಿದ್ದಾನೆ. ಜಾತಿ, ತಂದೆ, ತಾಯಿ ಮತ್ತು ನಮಗೇನು ಮಾಡದ, ಆದರೆ ನಮ್ಮಿಂದ ಎಲ್ಲಾ ಪಡೆಯುವ ಸಮಾಜ ಸನಿಹವಾಯಿತು, ಮದುವೆಮಾತು ದೂರಾವಾಗುವ ಹಾಗಾಯಿತು, ಪ್ರೀತಿಗಾಗಿ ಅಳುವ ಹೃದಯಗಳ ಮೇಲೆ ಜವಾಬ್ದಾರಿಗಳ ಸವಾರಿ. ಎಲ್ಲಾ ವಿಧಿ ಲೀಲೆ..! ನಡೆಯಲಿ ಬಿಡು. ನಿನ್ನ ನೆರಳಾಗುವ ಬಯಕೆಯಲ್ಲಿ ನಿನ್ನ ಗೆಳೆಯನಾಗಿ, ನಿನಗೇನೂ ಆಗದೇ, ತಲೆಯೇರಿ ನಿಂತ ಸೂರ್ಯನ ವರಸೆಗೆ ನನ್ನ ನೆರಳು ನಿನ್ನ ಪಾದ ಸೇರಿಹೋಯಿತಲ್ಲ..!! ಆಗಲೇ ನಾನು ತಟಸ್ಥನಾಗಿಬಿಟ್ಟೆ ಕಣೇ. ನಿನ್ನ ಮರೆಯಲಾರದೇ, ನೀನಿಲ್ಲದೇ ಬದುಕುವುದ ತಿಳಿಯಲಾರದೇ , ಬಾನಿನಾಚೆ ಶೂನ್ಯದ ಕಡೆ ದೃಷ್ಠಿ ನೆಟ್ಟು ಬದುಕಿಗೆ ಭಾರವಾಗಿಬಿಟ್ಟೆ.

ಈಗಲೂ ನಾವು ಮದುವೆಯಾಗೋಣವಾ..? ಎಂದು ನಿನ್ನ ಕೇಳುವಾಸೆ, ಆದರೆ ಅದಾಗದು ಎಂಬುದು ವಾಸ್ತವ. ಇನ್ನು ಮುಂದೆ ನಾನು ತೀರಾ ಒಬ್ಬಂಟಿ. ಆದರೆ ನನ್ನ ಕಾಡಿದಷ್ಟು ನಿನ್ನ ಕಾಡದು ಈ ಒಬ್ಬಂಟಿತನ ಅಲ್ಲವಾ..? ನೀನಾದರೋ ಇನ್ನು ಮುಂದೆ ಸದಾ ಜೊತೆ ಜೊತೆ. ನವದಾಂಪತ್ಯ, ನವೋಲ್ಲಾಸಗಳ ಮಧ್ಯೆ ನನ್ನ ನೆನಪು ನಿನ್ನ ಕಾಡದಿರಬಹುದು. ಕಾಡದಿರಲಿ ಅಂತ ದೇವರಲ್ಲಿ ಬೇಡುವುದೇ ನಾ ನಿನಗೆ ಕೊಡುವ 'ಒಲವಿನ ಉಡುಗೊರೆ'.

Friday, January 22, 2010

ಕೊನೆಯ ಮಾತು




ಪ್ರೀತಿಯ ಗೆಳೆಯ ಗೆಳತಿಯರೇ ಇದು ನಾನು ಇದುವರೆಗೂ ನನ್ನ ಪ್ರೀತಿಯ ಮೇಲೆ ಇಟ್ಟಿದ್ದ ನಂಬಿಕೆ ಹುಸಿಯಾಗುವ ಸಮಯ, ಜೀವಕ್ಕೆ ಜೀವ ಕೊಡುತ್ತೇನೆ ಎಂದ ಹುಡುಗಿ ಸಣ್ಣ ಮನಸ್ತಾಪಕ್ಕೆ ನನ್ನ ಪ್ರೀತಿಯನ್ನೇ ದಿಕ್ಕರಿಸಿ ನಡೆದು ಹೋದ ದಿನ. ಆ ನಿರ್ದಾರದಲ್ಲಿ ಅವಳಿಗಿಂತ ಅವಳ ಸ್ನೇಹಿತೇಯರ ಪ್ರಭಾವವೇ ಹೆಚ್ಚು.

ಜೀವನಪೂರ್ತೀ ಆಸರೆಯಾಗುವೆ, ಉಸಿರು ನಿಂತರು ನಿನ್ನ ಮರೆಯಲಾರೆ ಅಂದ ಹುಡುಗಿ ಇದ್ದಕಿದ್ದಂತೆ ನಡೆದು ಹೋದದ್ದಕ್ಕೆ ಕಾರಣ ಮಾತ್ರ ಚಿಕ್ಕದು.
ಹುಡುಗಿಯರಿಗೆ ಕಣ್ಣೀರು ಜಾಸ್ತಿ ಬರುತ್ತೆ ಯಾಕೆ ಗೊತ್ತ? ಹುಡುಗರನ್ನ ನಂಬಿಸೋದಕ್ಕೆ ಅಸ್ಟೆ. ಅಲ್ಲಿ ನಿಜವಾದ ಪ್ರೀತಿ ಇರೋದಿಲ್ಲ, ಇದ್ದರು ಅದು ಕ್ಷಣಿಕ.
ಒಂದು ಹುಡುಗಿ ಒಂದೇ ಹುಡುಗನನ್ನ ಜೀವನಪೂರ್ತಿ ಪ್ರೀತಿಸೋ ಕಾಲ ಈಗಿಲ್ಲ ಆದ್ರೆ ಆ ರೀತಿ ಹುಡುಗರು ಇನ್ನೂ ಇದ್ದಾರೆ ಅಂತ ಅವರಿಗೆ ಗೊತ್ತಿಲ್ಲ.
ಅವ್ರಿಗೆ ನಿಜವಾದ ಪ್ರೀತಿಯ ಅರಿವಿಲ್ಲ.
ಹುಡುಗರ ಮನಸ್ಸಿನ ನೋವು ತಿಳಿಯೋದಿಲ್ಲ,
ಹುಡುಗರಿಗೆ ಇರುವ ತಾಳ್ಮೆ ಇರೋದಿಲ್ಲ,
ಮರೆಯೋದು ಅಂದ್ರೆ ತುಂಬಾ ಸುಲಭ,
ಅವರ ಪ್ರಕಾರ ಪ್ರೀತಿ ಅಂದ್ರೆ ಟೈಮ್ ಪಾಸ್,
ಪ್ರೀತಿ ಅಂದ್ರೆ ತಿಂದು ಬಿಸಾಕೋ ಎಲೆ ಇದ್ದ ಹಾಗೆ,
ಬದಲಿಸೋ ಬಟ್ಟೆ ಇದ್ದ ಹಾಗೆ,

ಈ ಹುಡುಗಿಯರಿಂದ ಮೋಸ ಹೋದವರು ಸಾವಿರಾರು ಅದರಲ್ಲಿ ನಾನು ಒಬ್ಬ,
ಪ್ರೀತಿಗಾಗಿ ಎಲ್ಲವನ್ನು ಕಳೆದುಕೊಂಡೆ ಈಗ ಆ ಪ್ರೀತಿಯೇ ನನ್ನ ದೂರ ತಳ್ಳಿದೆ,
ಅವಳಿಗೆ ನನ್ನ ಮನಸು ಬೇಡ, ನನ್ನ ಪ್ರೀತಿ ಬೇಡ, ಆ ಸುಮಧುರ ನೆನಪು ಬೇಡ,
ನನ್ನನ್ನ ಪೂರ್ತಿಯಾಗಿ ಮರೆತು ನನ್ನ ಅಣಕಿಸುತ್ತಿರುವ ನನ್ನ ಪ್ರೀತಿಯ ಹುಡುಗಿಗೆ ಜೀವನದಲ್ಲಿ ಕೊನೆಯದಾಗಿ
ಒಂದು ಪತ್ರ ಬರೆಯಬೇಕೆಂದಿದ್ದೇನೆ.
ಸದ್ಯದಲ್ಲೇ ಇಲ್ಲಿ ನಿಮ್ಮ ಜೊತೆ ನನ್ನ ಭಾವನೆಯನ್ನು ಹಂಚಿಕೊಳ್ಳುತ್ತೇನೆ.

ಮತ್ತು ಇಲ್ಲಿ ಹೇಳಿರುವ ಮಾತುಗಳು ಕೆಲವು ಹುಡುಗಿಯರಿಗೆ ಮಾತ್ರ ಅನ್ವಹಿಸುತ್ತವೆ.
ನನಗೆ ಎಲ್ಲ ಹುಡುಗಿಯರ ಬಗ್ಗೆ ಗೌರವ ಇದೆ ಪ್ರೀತಿಗೆ ಮೋಸ ಮಾಡಿದ ಹುಡುಗಿಯರನ್ನು ಹೊರತುಪಡಿಸಿ,
ನಾನು ಪ್ರೀತಿ ಮಾಡಿದ ಹುಡುಗಿ ನನ್ನನ್ನು ಮರೆತಿರಬಹುದು ನನ್ನ ಪ್ರೀತಿ ಅವಳಿಗೆ ಬೇಡವಾಗಿರಬಹುದು ಆದ್ರೆ ನನ್ನ ಪ್ರೀತಿ ಯಾವಾಗಲು ಶಾಶ್ವಥ
ಅದಕ್ಕೆ ಎಂದು ಸಾವಿಲ್ಲ, ನನ್ನ ಪ್ರೀತಿನ ನಾನೇ ಪ್ರೀತಿಸ್ತೇನೆ.
YES I REALLY LOVE MY FEELINGS,
I LOVE MY FEELINGS,
I LIKE MY FEELINGS,
I LIVE WITH MY FEELINGS.

ಗೆಳೆಯರೇ ಇಂದು ನನ್ನ ಹುಡುಗಿಯ ಎಲ್ಲ ಫೋಟೋಗಳನ್ನು ಅವಳಿಗೋಸ್ಕರ ಅಲ್ಲದಿದ್ದರೂ ಅವಳ ಪ್ರಾಣ ಸ್ನೆಹಿತೆಗೊಸ್ಕರ ತೆಗೆಯುತ್ತಿದ್ದೇನೆ.



Wednesday, January 20, 2010

ಹೊರಡುವ ಸಡಗರ

ಹೊರಡುವ ಸಡಗರ





ನನ್ನ ಪ್ರೀತಿಯ ಸ್ನೇಹ ಹೋಗಲೇ ಬೇಕು ಅನ್ನುವ ನಿನ್ನ ಸಡಗರಕ್ಕೆ ನಾನು ಅಡ್ಡ ಬರುವುದಿಲ್ಲ. ಬಿಟ್ಟು ಹೊರಡುತ್ತಿರುವುದಕ್ಕೆ ಕಾರಣವನ್ನೂ ಕೇಳುತ್ತಿಲ್ಲ. ಮತ್ತೆ ನಿನಗೆ ಪತ್ರ ಬರೆಯುತ್ತೇನೋ ಇಲ್ಲವೋ? ಗುಂಡಗಿರುವ ಭೂಮಿ ಎಷ್ಟೇ ಚಿಕ್ಕದು ಅಂದುಕೊಂಡರೂ ಮತ್ತೆ ಭೇಟಿಯಾಗುತ್ತೇವೋ ಇಲ್ಲವೋ ; ಅದೇ ಹಳೆಯ ಮಮತೆಯಿಂದ. ಆಡುವ ಮಾತು ಕೊನೆಯವೇ ಆದರೂ ನಾಲ್ಕು ಘಳಿಗೆ ಕೂತು ಮಾತನಾಡಿ ಬಿಡೋಣ. ಹೀಗೆ ಬಾ, ಎದುರಿಗೆ ಕುಳಿತುಕೋ.


ಒಂದು ಮಾತು ಹೇಳುತ್ತೇನೆ ಕೇಳು. ಒಂದೂವರೆ ವರ್ಷವೆಂಬುದು ಸುಮ್ಮನೆ ಸರಿದು ಹೋದ ಕಾಲವಲ್ಲ. ಐದು ನೂರಾ ನಲವತ್ತೇಳು ದಿನಗಳ ಒಟ್ಟು ಮೊತ್ತ. ನೀನು ಬದುಕಲಿರುವ ಸಂಪೂರ್ಣ ನೂರು ವರ್ಷಗಳ ಜೀವಿತಾವಧಿಯಲ್ಲಿ ಈ ಒಂದೂವರೆ ವರ್ಷಗಳದ್ದು ನಿನ್ನ ಮಟ್ಟಿಗೆ ಚಿಕ್ಕ ಮೊತ್ತವೇ ಇರಬಹುದು. ಆದರೆ ನನ್ನ ಪಾಲಿಗೆ ಅದು ಸಾವಿರಾರು ಸೂರ್ಯೋದಯ-ಸೂರ್ಯಾಸ್ತಗಳ ಮಹಾ ಸಂಭ್ರಮ. ಪ್ರತಿ ಮುಂಜಾವೂ ನನ್ನ ಪಾಲಿಗೆ ಹೊಸ ವಸಂತ.

ನಿನ್ನ ನೆನಪಿನ ಗೆಜ್ಜೆ ಕಟ್ಟಿಕೊಂಡೇ ಏಳುತ್ತಿದ್ದೆ. ಇವತ್ತು ಅವಳು ಸಿಗುತ್ತಾಳೆ. ಹೀಗೆ ಮಾತಾಡ್ತಾಳೆ. ಮೃದುವಾಗಿ ನಗುತ್ತಾಳೆ. ಪುಟ್ಟ ಪತ್ರ ಬರೆದುಕೊಂಡು ಬಂದಿರುತ್ತಾಳೆ. ತುಟಿಯ ತಿರುವಿನಲ್ಲಿ ಯಾಕೋ ಸಣ್ಣ ಮುನಿಸು. ನಂಗೊತ್ತು ಅಂಥದ್ದೇನೂ ನಾನು ಮಾಡಿಲ್ಲ. ಆದರೂ ನನ್ನ ಹುಡುಗಿ ಸುಮ್ಮ ಸುಮ್ಮನೆ ಅನುಮಾನಿಸುತ್ತಾಳೆ. ಅನುಮಾನವೆಂದರೆ ಅದು ಅನುಮಾನವೂ ಅಲ್ಲ. ಚಿಕ್ಕ ಅಸಹನೆ. ನಾನು ಯಾರೊಂದಿಗೂ ಮಾತನಾಡಬಾರದು. ಹುಡುಗಿಯರ ಮಾತು ಹಾಗಿರಲಿ, ಗೆಳೆಯರೊಂದಿಗೂ ತುಂಬ ಹೊತ್ತು ಮಾತಾಡಬಾರದು. 'ಅವರೊಂದಿಗೆ ಕುಳಿತು ಹರಟುವ ಅಷ್ಟು ನಿಮಿಷದ ಹೊತ್ತು ನನ್ನ ಮರೆತು ಬಿಟ್ಟಿರುತ್ತೀಯಲ್ಲ' ಅಂತ ಜಗಳ ತೆಗೆಯುತ್ತಾಳೆ. ಹೇಗೆ ಹೇಳಲಿ ಈ ಹುಡುಗಿಗೆ? ನನ್ನ ಪ್ರತಿ ಉಸುರಿನಲ್ಲೂ ನೀನಿದ್ದೀಯ. ನನ್ನ ಪ್ರತಿ ಕದಲಿಕೆ ನಿನ್ನ ಅಣತಿ. ನೀನಿಲ್ಲದೆ ನನ್ನ ಅಸ್ತಿತ್ವವಿಲ್ಲ. I am only yours. ಹಾಗಂತ ನನ್ನ ಮನಸ್ಸಿಗೆ ಪದೇಪದೆ ಹೇಳಿಕೊಂಡು ನಿನ್ನ ಬಳಿಗೆ ಬಂದರೆ, ನೀನು ಅದೆಲ್ಲ ಮರೆತು ಹೋಗುವಂತೆ ಇಷ್ಟಗಲ ನಗೆಯಾಗುತ್ತಿದ್ದೆ, ಸೂರ್ಯಕಾಂತಿ ಹೂವಿನ ಹಾಗೆ.

ಮೊದಲಿನಿಂದಲೂ ಅಷ್ಟೆ. ನಿನ್ನ ವರ್ತನೆ ಹೀಗೇ ಇರುತ್ತದೆ ಅನ್ನುವ ಹಾಗಿರಲಿಲ್ಲ. ಒಮ್ಮೆ ಪ್ರೀತಿಯ ಹೂಬಿಸಿಲು, ಮತ್ತೊಮ್ಮೆ ಚೆಲುವಿನ ಬೆಳದಿಂಗಳು, ಒಮ್ಮೆ ಬೇಸರದ ಕಡುಮೋಡ, ಇನ್ನೊಮ್ಮೆ ದಿವ್ಯನಗೆಯ ಧರೆದೀಪ, ಹುಚ್ಚು ಹೊಳೆಯಂತಹ ಅಪ್ಪುಗೆ, ಮೆದೆಯಲ್ಲಿ ಬಿದ್ದು ಉರುಳಿದ ಸುಸ್ತು. ಇದ್ದ ಒಂದೂವರೆ ವರ್ಷಗಳಲ್ಲಿ ಅದೆಷ್ಟು ಅನಂತವೆನ್ನಿಸುವಂತಹ ಪ್ರೀತಿ ಕೊಟ್ಟೆ ಹುಡುಗೀ? ಅಷ್ಟು ಪ್ರೀತಿ ಪಡೆದ ನಾನು ಕೊನೆಯ ದಿನವೇ ಸತ್ತು ಹೋಗಬೇಕಾಗಿತ್ತು. ಈ ಪತ್ರ ಬರೆಯಲು ಅಸಲು ಬದುಕಿರಬಾರದಿತ್ತು. ಆದರೆ ನೀನು, ಇದು ಕೊನೆಯ ದಿನವಾದೀತು ಎಂಬ ಸುಳಿವೇ ಕೊಡಲಿಲ್ಲ. ನೀನು ಕಳಿಸಿದ ಕರೆಯಲ್ಲಿ ಕಲುಷ ಕಾಣಲಿಲ್ಲ. ನಾನು ಸಂಭ್ರಮದಿಂದ ನಡೆದು ಬಂದೆ.

ಹೆಬ್ಬಾಗಿಲಲ್ಲಿ ಎಂದಿನಂತೆ ಪ್ರಣತಿಯಿತ್ತು. ಒಳಗೆ ಉಲಿಯುತ್ತಿದ್ದುದು ಸಣ್ಣ ವೀಣೆ. ಎಲ್ಲ ಬಾಗಿಲುಗಳಿಂದಲೂ ಹೊಂಬೆಳಕು ಬರುತ್ತಿತ್ತು. ಬಾಗಿಲಲ್ಲಿ ಇದಿರಾದವಳ ತುರುಬಿನಲ್ಲಿ ಮಲ್ಲಿಗೆ, ದವನ. ಕೈಹಿಡಿದು ಕರೆದೊಯ್ದು ಅಭ್ಯಂಜನ ಮಾಡಿಸಿದೆ. ಕರ್ಪೂರ ಬೆರೆತ ಎಣ್ಣೆಯಲ್ಲಿ ತೋಯ್ದು ಮೈಗೆ ಸ್ವಚ್ಛ ಸೀಗೆಯ ಲೇಪ. ನೀನು ಮೈಯೊರೆಸುತ್ತಿದ್ದರೆ ನನ್ನಲ್ಲಿ ಮಗುವೊಂದು ಹಿತವಾಗಿ ಹೊರಳುತ್ತಿತ್ತು. ಅಷ್ಟು ಪ್ರೀತಿಯಿಂದ ನೀನು ಯಾವತ್ತೂ ಉಣಬಡಿಸಿರಲಿಲ್ಲವೇನೋ? ಬೆರಳ ತುದಿಯಲ್ಲಿ ಮೊಸರಕೆನೆ ನೆಕ್ಕಿಸಿದವಳು ಯಾವಾಗ ಜೇನು ಬೆರೆಸಿದ್ದೆಯೋ? ನೀನು ಒಂದೊಂದಾಗಿ ಕಿಟಕಿಯ ಪರದೆಗಳನ್ನು ಹಾಕುತ್ತ ಬಂದೆ. ಅದು ಮೇಘ ಮಂಥನದ ಆಹ್ವಾನ. ನನ್ನೊಳಗಿನ ನಾಭಿಯಾಳದಲ್ಲಿ ಪ್ರಾಣ ಬಂದಿತ್ತು. ನಿನ್ನ ಮೈಯ ಘಮದಲ್ಲಿ ಈಸು ಬಿದ್ದ ಘಳಿಗೆ, ನನ್ನನ್ನು ನಾನು ಇಡಿಯಾಗಿ ಮರೆತಿದ್ದೆ.

ಆಗಲೇ ಅಲ್ಲವಾ ನೀನು ಬಿಟ್ಟು ಹೋಗುವ ಮಾತನಾಡಿದ್ದು? ವೀಣೆಯ ಮೊದಲ ತಂತಿ ಖಟ್ಟನೆ ತುಂಡಾದ ಸದ್ದು. ನಿಜ ಹೇಳು, ಇದೆಲ್ಲ ನಿನಗೆ ಒಂದೂವರೆ ವರ್ಷಗಳ ಮುಂಚೆಯೇ ಗೊತ್ತಿತ್ತಾ? ಒಂದು ಸಲ ಹೇಳಿ ಬಿಡು, ಅಪ್ಪಿಕೊಂಡ ಎರಡು ಸುಕೋಮಲ ಕೈಗಳ ಪೈಕಿ ಯಾವುದರಲ್ಲಿ ಚೂರಿ ಅಡಗಿಸಿಕೊಂಡಿದ್ದೆ? ನೀನು ಆ ಮಾತು ಹೇಳಿದ ಮೇಲೂ ನಾನು ಏಕೆ ಸತ್ತು ಹೋಗಲಿಲ್ಲ. ಬಿಡು, ನಿನ್ನಲ್ಲಿ ಉತ್ತರವಿದ್ದಿದ್ದರೆ ನೀನಾದರೂ ಯಾಕೆ ಹೀಗೆಲ್ಲ ಮಾಡುತ್ತಿದ್ದೆ? ಮರಣದಂಡನೆ ವಿಧಿಸಿಯಾದ ಮೇಲೆ ನ್ಯಾಯಾಧೀಶನ ಮನಸ್ಸಿನಲ್ಲಿ ನಿಟ್ಟುಸಿರಿನ ಹೊರತು ಮತ್ತೇನೂ ಉಳಿದಿರುವುದಿಲ್ಲ. ಅಲ್ಲಿ ದಯೆಯಿರುವುದಿಲ್ಲ. ಕರುಣೆಯಿರುವುದಿಲ್ಲ. ಕೊಂದೆನೆಂಬ ಪಶ್ಚಾತ್ತಾಪವಿರುವುದಿಲ್ಲ. ಕೇವಲ ನಿರ್ದಯತೆ ರಾಜ್ಯವಾಳುತ್ತಿರುತ್ತದೆ.

ಆಯಿತು, ನಿನ್ನ ನಿರ್ಧಾರವೇ ಜಾರಿಗೆ ಬರಲಿ. ನಿನ್ನ ಪಾಲಿಗೆ ಇದೊಂದು ಚಿಕ್ಕ ಹೊರಳು. ಇಲ್ಲಿ ಮುಳುಗಿದವಳಿಗೆ ಅಲ್ಲಿ ಮೇಲೆದ್ದರೆ ಇನ್ನೊಬ್ಬನ ತೋಳಿನಾಸರೆ. ಅವನು ನನಗಿಂತ ಚೆಲುವನಿರಬಹುದು. ರಸಿಕ? ಯಾಕಾಗಬಾರದು? ಶ್ರೀಮಂತ, ಸುಶಿಕ್ಷಿತ, ಗಂಭೀರ, ಧೈರ್ಯವಂತ- ಎಲ್ಲವೂ ಆಗಿರುತ್ತಾನೆ. ಆಗಿರಲಿ ಬಿಡು. ಆದರೆ ನನಗಿಂತ ಹೆಚ್ಚು ಪ್ರೀತಿಸುವವನಾಗಿರಲಾರ. ಅಹಂಕಾರಪಡಲಿಕ್ಕೆ ಅದೊಂದೇ ನನಗೆ ಉಳಿದಿರುದು. ಅಷ್ಟನ್ನಾದರೂ ಉಳಿಸಿ ಹೋಗು. ಜಗತ್ತಿನ ಇನ್ಯಾವ ಗಂಡಸು ಕೂಡ ನಿನಗೆ ಆ ಒಂದೂವರೆ ವರ್ಷಗಳನ್ನು ಹಿಂತಿರುಗಿಸಲಾರ. ಬೇಕಾದರೆ ನನ್ನ ನಾಳೆಗಳನ್ನು ಒಯ್ದುಬಿಡು. ಅವುಗಳ ಅವಶ್ಯಕತೆ ಇನ್ನು ನನಗಿಲ್ಲ. ಬೆಳಕು ತನ್ನ ಸಂತೆ ಮುಗಿಸಿ ಹೋದ ಮನೆಯಲ್ಲಿ ಪ್ರಣತಿ ಅಪ್ರಸ್ತುತ.

'ಮತ್ತೆ ಬಾ' ಹಾಗಂತ ಕರೆಯಲಾರೆ. ಬಂದರೂ ಬಂದೇನು ಎಂಬ ಭ್ರಮೆ ಹುಟ್ಟಿಸಿ ಹೋಗಬೇಡ. ಎಲ್ಲ ಹುಡುಗಿಯರೂ ಮಾಡು ತಪ್ಪು ಮಾಡಬೇಡ. ಎದುರಿಗೆ ಸಿಕ್ಕಾಗ ಹಳೆಯ ಕನಸು, ಕನವರಿಗೆ ಬೇಡ. ಇದು ಇಲ್ಲಿಗೆ ಮುಗಿಯಲಿ, ಎಲ್ಲ ಒಳ್ಳೆಯವುಗಳೂ ಒಮ್ಮೆ ಮುಗಿದು ಹೋಗುವಂತೆ.


ಇಂತಿ ನಿನ್ನ ಪ್ರೀತಿಯ ರಾಜೇಶ