Wednesday, January 20, 2010

ಹೊರಡುವ ಸಡಗರ

ಹೊರಡುವ ಸಡಗರ





ನನ್ನ ಪ್ರೀತಿಯ ಸ್ನೇಹ ಹೋಗಲೇ ಬೇಕು ಅನ್ನುವ ನಿನ್ನ ಸಡಗರಕ್ಕೆ ನಾನು ಅಡ್ಡ ಬರುವುದಿಲ್ಲ. ಬಿಟ್ಟು ಹೊರಡುತ್ತಿರುವುದಕ್ಕೆ ಕಾರಣವನ್ನೂ ಕೇಳುತ್ತಿಲ್ಲ. ಮತ್ತೆ ನಿನಗೆ ಪತ್ರ ಬರೆಯುತ್ತೇನೋ ಇಲ್ಲವೋ? ಗುಂಡಗಿರುವ ಭೂಮಿ ಎಷ್ಟೇ ಚಿಕ್ಕದು ಅಂದುಕೊಂಡರೂ ಮತ್ತೆ ಭೇಟಿಯಾಗುತ್ತೇವೋ ಇಲ್ಲವೋ ; ಅದೇ ಹಳೆಯ ಮಮತೆಯಿಂದ. ಆಡುವ ಮಾತು ಕೊನೆಯವೇ ಆದರೂ ನಾಲ್ಕು ಘಳಿಗೆ ಕೂತು ಮಾತನಾಡಿ ಬಿಡೋಣ. ಹೀಗೆ ಬಾ, ಎದುರಿಗೆ ಕುಳಿತುಕೋ.


ಒಂದು ಮಾತು ಹೇಳುತ್ತೇನೆ ಕೇಳು. ಒಂದೂವರೆ ವರ್ಷವೆಂಬುದು ಸುಮ್ಮನೆ ಸರಿದು ಹೋದ ಕಾಲವಲ್ಲ. ಐದು ನೂರಾ ನಲವತ್ತೇಳು ದಿನಗಳ ಒಟ್ಟು ಮೊತ್ತ. ನೀನು ಬದುಕಲಿರುವ ಸಂಪೂರ್ಣ ನೂರು ವರ್ಷಗಳ ಜೀವಿತಾವಧಿಯಲ್ಲಿ ಈ ಒಂದೂವರೆ ವರ್ಷಗಳದ್ದು ನಿನ್ನ ಮಟ್ಟಿಗೆ ಚಿಕ್ಕ ಮೊತ್ತವೇ ಇರಬಹುದು. ಆದರೆ ನನ್ನ ಪಾಲಿಗೆ ಅದು ಸಾವಿರಾರು ಸೂರ್ಯೋದಯ-ಸೂರ್ಯಾಸ್ತಗಳ ಮಹಾ ಸಂಭ್ರಮ. ಪ್ರತಿ ಮುಂಜಾವೂ ನನ್ನ ಪಾಲಿಗೆ ಹೊಸ ವಸಂತ.

ನಿನ್ನ ನೆನಪಿನ ಗೆಜ್ಜೆ ಕಟ್ಟಿಕೊಂಡೇ ಏಳುತ್ತಿದ್ದೆ. ಇವತ್ತು ಅವಳು ಸಿಗುತ್ತಾಳೆ. ಹೀಗೆ ಮಾತಾಡ್ತಾಳೆ. ಮೃದುವಾಗಿ ನಗುತ್ತಾಳೆ. ಪುಟ್ಟ ಪತ್ರ ಬರೆದುಕೊಂಡು ಬಂದಿರುತ್ತಾಳೆ. ತುಟಿಯ ತಿರುವಿನಲ್ಲಿ ಯಾಕೋ ಸಣ್ಣ ಮುನಿಸು. ನಂಗೊತ್ತು ಅಂಥದ್ದೇನೂ ನಾನು ಮಾಡಿಲ್ಲ. ಆದರೂ ನನ್ನ ಹುಡುಗಿ ಸುಮ್ಮ ಸುಮ್ಮನೆ ಅನುಮಾನಿಸುತ್ತಾಳೆ. ಅನುಮಾನವೆಂದರೆ ಅದು ಅನುಮಾನವೂ ಅಲ್ಲ. ಚಿಕ್ಕ ಅಸಹನೆ. ನಾನು ಯಾರೊಂದಿಗೂ ಮಾತನಾಡಬಾರದು. ಹುಡುಗಿಯರ ಮಾತು ಹಾಗಿರಲಿ, ಗೆಳೆಯರೊಂದಿಗೂ ತುಂಬ ಹೊತ್ತು ಮಾತಾಡಬಾರದು. 'ಅವರೊಂದಿಗೆ ಕುಳಿತು ಹರಟುವ ಅಷ್ಟು ನಿಮಿಷದ ಹೊತ್ತು ನನ್ನ ಮರೆತು ಬಿಟ್ಟಿರುತ್ತೀಯಲ್ಲ' ಅಂತ ಜಗಳ ತೆಗೆಯುತ್ತಾಳೆ. ಹೇಗೆ ಹೇಳಲಿ ಈ ಹುಡುಗಿಗೆ? ನನ್ನ ಪ್ರತಿ ಉಸುರಿನಲ್ಲೂ ನೀನಿದ್ದೀಯ. ನನ್ನ ಪ್ರತಿ ಕದಲಿಕೆ ನಿನ್ನ ಅಣತಿ. ನೀನಿಲ್ಲದೆ ನನ್ನ ಅಸ್ತಿತ್ವವಿಲ್ಲ. I am only yours. ಹಾಗಂತ ನನ್ನ ಮನಸ್ಸಿಗೆ ಪದೇಪದೆ ಹೇಳಿಕೊಂಡು ನಿನ್ನ ಬಳಿಗೆ ಬಂದರೆ, ನೀನು ಅದೆಲ್ಲ ಮರೆತು ಹೋಗುವಂತೆ ಇಷ್ಟಗಲ ನಗೆಯಾಗುತ್ತಿದ್ದೆ, ಸೂರ್ಯಕಾಂತಿ ಹೂವಿನ ಹಾಗೆ.

ಮೊದಲಿನಿಂದಲೂ ಅಷ್ಟೆ. ನಿನ್ನ ವರ್ತನೆ ಹೀಗೇ ಇರುತ್ತದೆ ಅನ್ನುವ ಹಾಗಿರಲಿಲ್ಲ. ಒಮ್ಮೆ ಪ್ರೀತಿಯ ಹೂಬಿಸಿಲು, ಮತ್ತೊಮ್ಮೆ ಚೆಲುವಿನ ಬೆಳದಿಂಗಳು, ಒಮ್ಮೆ ಬೇಸರದ ಕಡುಮೋಡ, ಇನ್ನೊಮ್ಮೆ ದಿವ್ಯನಗೆಯ ಧರೆದೀಪ, ಹುಚ್ಚು ಹೊಳೆಯಂತಹ ಅಪ್ಪುಗೆ, ಮೆದೆಯಲ್ಲಿ ಬಿದ್ದು ಉರುಳಿದ ಸುಸ್ತು. ಇದ್ದ ಒಂದೂವರೆ ವರ್ಷಗಳಲ್ಲಿ ಅದೆಷ್ಟು ಅನಂತವೆನ್ನಿಸುವಂತಹ ಪ್ರೀತಿ ಕೊಟ್ಟೆ ಹುಡುಗೀ? ಅಷ್ಟು ಪ್ರೀತಿ ಪಡೆದ ನಾನು ಕೊನೆಯ ದಿನವೇ ಸತ್ತು ಹೋಗಬೇಕಾಗಿತ್ತು. ಈ ಪತ್ರ ಬರೆಯಲು ಅಸಲು ಬದುಕಿರಬಾರದಿತ್ತು. ಆದರೆ ನೀನು, ಇದು ಕೊನೆಯ ದಿನವಾದೀತು ಎಂಬ ಸುಳಿವೇ ಕೊಡಲಿಲ್ಲ. ನೀನು ಕಳಿಸಿದ ಕರೆಯಲ್ಲಿ ಕಲುಷ ಕಾಣಲಿಲ್ಲ. ನಾನು ಸಂಭ್ರಮದಿಂದ ನಡೆದು ಬಂದೆ.

ಹೆಬ್ಬಾಗಿಲಲ್ಲಿ ಎಂದಿನಂತೆ ಪ್ರಣತಿಯಿತ್ತು. ಒಳಗೆ ಉಲಿಯುತ್ತಿದ್ದುದು ಸಣ್ಣ ವೀಣೆ. ಎಲ್ಲ ಬಾಗಿಲುಗಳಿಂದಲೂ ಹೊಂಬೆಳಕು ಬರುತ್ತಿತ್ತು. ಬಾಗಿಲಲ್ಲಿ ಇದಿರಾದವಳ ತುರುಬಿನಲ್ಲಿ ಮಲ್ಲಿಗೆ, ದವನ. ಕೈಹಿಡಿದು ಕರೆದೊಯ್ದು ಅಭ್ಯಂಜನ ಮಾಡಿಸಿದೆ. ಕರ್ಪೂರ ಬೆರೆತ ಎಣ್ಣೆಯಲ್ಲಿ ತೋಯ್ದು ಮೈಗೆ ಸ್ವಚ್ಛ ಸೀಗೆಯ ಲೇಪ. ನೀನು ಮೈಯೊರೆಸುತ್ತಿದ್ದರೆ ನನ್ನಲ್ಲಿ ಮಗುವೊಂದು ಹಿತವಾಗಿ ಹೊರಳುತ್ತಿತ್ತು. ಅಷ್ಟು ಪ್ರೀತಿಯಿಂದ ನೀನು ಯಾವತ್ತೂ ಉಣಬಡಿಸಿರಲಿಲ್ಲವೇನೋ? ಬೆರಳ ತುದಿಯಲ್ಲಿ ಮೊಸರಕೆನೆ ನೆಕ್ಕಿಸಿದವಳು ಯಾವಾಗ ಜೇನು ಬೆರೆಸಿದ್ದೆಯೋ? ನೀನು ಒಂದೊಂದಾಗಿ ಕಿಟಕಿಯ ಪರದೆಗಳನ್ನು ಹಾಕುತ್ತ ಬಂದೆ. ಅದು ಮೇಘ ಮಂಥನದ ಆಹ್ವಾನ. ನನ್ನೊಳಗಿನ ನಾಭಿಯಾಳದಲ್ಲಿ ಪ್ರಾಣ ಬಂದಿತ್ತು. ನಿನ್ನ ಮೈಯ ಘಮದಲ್ಲಿ ಈಸು ಬಿದ್ದ ಘಳಿಗೆ, ನನ್ನನ್ನು ನಾನು ಇಡಿಯಾಗಿ ಮರೆತಿದ್ದೆ.

ಆಗಲೇ ಅಲ್ಲವಾ ನೀನು ಬಿಟ್ಟು ಹೋಗುವ ಮಾತನಾಡಿದ್ದು? ವೀಣೆಯ ಮೊದಲ ತಂತಿ ಖಟ್ಟನೆ ತುಂಡಾದ ಸದ್ದು. ನಿಜ ಹೇಳು, ಇದೆಲ್ಲ ನಿನಗೆ ಒಂದೂವರೆ ವರ್ಷಗಳ ಮುಂಚೆಯೇ ಗೊತ್ತಿತ್ತಾ? ಒಂದು ಸಲ ಹೇಳಿ ಬಿಡು, ಅಪ್ಪಿಕೊಂಡ ಎರಡು ಸುಕೋಮಲ ಕೈಗಳ ಪೈಕಿ ಯಾವುದರಲ್ಲಿ ಚೂರಿ ಅಡಗಿಸಿಕೊಂಡಿದ್ದೆ? ನೀನು ಆ ಮಾತು ಹೇಳಿದ ಮೇಲೂ ನಾನು ಏಕೆ ಸತ್ತು ಹೋಗಲಿಲ್ಲ. ಬಿಡು, ನಿನ್ನಲ್ಲಿ ಉತ್ತರವಿದ್ದಿದ್ದರೆ ನೀನಾದರೂ ಯಾಕೆ ಹೀಗೆಲ್ಲ ಮಾಡುತ್ತಿದ್ದೆ? ಮರಣದಂಡನೆ ವಿಧಿಸಿಯಾದ ಮೇಲೆ ನ್ಯಾಯಾಧೀಶನ ಮನಸ್ಸಿನಲ್ಲಿ ನಿಟ್ಟುಸಿರಿನ ಹೊರತು ಮತ್ತೇನೂ ಉಳಿದಿರುವುದಿಲ್ಲ. ಅಲ್ಲಿ ದಯೆಯಿರುವುದಿಲ್ಲ. ಕರುಣೆಯಿರುವುದಿಲ್ಲ. ಕೊಂದೆನೆಂಬ ಪಶ್ಚಾತ್ತಾಪವಿರುವುದಿಲ್ಲ. ಕೇವಲ ನಿರ್ದಯತೆ ರಾಜ್ಯವಾಳುತ್ತಿರುತ್ತದೆ.

ಆಯಿತು, ನಿನ್ನ ನಿರ್ಧಾರವೇ ಜಾರಿಗೆ ಬರಲಿ. ನಿನ್ನ ಪಾಲಿಗೆ ಇದೊಂದು ಚಿಕ್ಕ ಹೊರಳು. ಇಲ್ಲಿ ಮುಳುಗಿದವಳಿಗೆ ಅಲ್ಲಿ ಮೇಲೆದ್ದರೆ ಇನ್ನೊಬ್ಬನ ತೋಳಿನಾಸರೆ. ಅವನು ನನಗಿಂತ ಚೆಲುವನಿರಬಹುದು. ರಸಿಕ? ಯಾಕಾಗಬಾರದು? ಶ್ರೀಮಂತ, ಸುಶಿಕ್ಷಿತ, ಗಂಭೀರ, ಧೈರ್ಯವಂತ- ಎಲ್ಲವೂ ಆಗಿರುತ್ತಾನೆ. ಆಗಿರಲಿ ಬಿಡು. ಆದರೆ ನನಗಿಂತ ಹೆಚ್ಚು ಪ್ರೀತಿಸುವವನಾಗಿರಲಾರ. ಅಹಂಕಾರಪಡಲಿಕ್ಕೆ ಅದೊಂದೇ ನನಗೆ ಉಳಿದಿರುದು. ಅಷ್ಟನ್ನಾದರೂ ಉಳಿಸಿ ಹೋಗು. ಜಗತ್ತಿನ ಇನ್ಯಾವ ಗಂಡಸು ಕೂಡ ನಿನಗೆ ಆ ಒಂದೂವರೆ ವರ್ಷಗಳನ್ನು ಹಿಂತಿರುಗಿಸಲಾರ. ಬೇಕಾದರೆ ನನ್ನ ನಾಳೆಗಳನ್ನು ಒಯ್ದುಬಿಡು. ಅವುಗಳ ಅವಶ್ಯಕತೆ ಇನ್ನು ನನಗಿಲ್ಲ. ಬೆಳಕು ತನ್ನ ಸಂತೆ ಮುಗಿಸಿ ಹೋದ ಮನೆಯಲ್ಲಿ ಪ್ರಣತಿ ಅಪ್ರಸ್ತುತ.

'ಮತ್ತೆ ಬಾ' ಹಾಗಂತ ಕರೆಯಲಾರೆ. ಬಂದರೂ ಬಂದೇನು ಎಂಬ ಭ್ರಮೆ ಹುಟ್ಟಿಸಿ ಹೋಗಬೇಡ. ಎಲ್ಲ ಹುಡುಗಿಯರೂ ಮಾಡು ತಪ್ಪು ಮಾಡಬೇಡ. ಎದುರಿಗೆ ಸಿಕ್ಕಾಗ ಹಳೆಯ ಕನಸು, ಕನವರಿಗೆ ಬೇಡ. ಇದು ಇಲ್ಲಿಗೆ ಮುಗಿಯಲಿ, ಎಲ್ಲ ಒಳ್ಳೆಯವುಗಳೂ ಒಮ್ಮೆ ಮುಗಿದು ಹೋಗುವಂತೆ.


ಇಂತಿ ನಿನ್ನ ಪ್ರೀತಿಯ ರಾಜೇಶ

0 comments:

Post a Comment