Friday, July 9, 2010

ಪ್ರೀತಿಯ ಗೆಳತಿಗೆ ಕೊನೆಯ ಪ್ರೇಮ ಪತ್ರ

ಜೀವನದ ಪಯಣದಲಿ ಯಾವುದೋ ಒಂದು ನಿಲ್ದಾಣದಲಿ ಸಿಕ್ಕವಳು ನೀನು. ಸಿಕ್ಕ ಹಾಗೇ ಇಳಿದು ಹೋಗುವೆ ಅಂತ ನನಗೆ ಗೊತ್ತಿರಲಿಲ್ಲ. ಆದರೂ ಇಳಿದುಹೋಗುತ್ತಿರುವೆ, ಆದರೆ ನೀನು ಉಳಿಸಿಹೋದ ನೆನಪುಗಳು, ಕೆರಳಿಸಿಹೋದ ಭಾವನೆಗಳು ನನ್ನ ಸುಮ್ಮನೇ ಬಿಟ್ಟಾವೇ..!! No chance. ನೀನು ಮದುವೆಯ ಮುಂದಿನ ನಿಲ್ದಾಣದಲ್ಲಿ ಇಳಿದು ಹೋಗುವೆ ಎಂದು ತಿಳಿದಾಗಿನಿಂದ, ನಾನು ನಾನಾಗಿಲ್ಲ. ಬಾಲ್ಯದಲ್ಲಿ ತಾಯಿಯನ್ನು ಬಿಟ್ಟು ಶಾಲೆಗೆ ಹೋಗಲಾರದೇ ಅಳುವ ಕಂದನ ಹಾಗೇ, ತುಂಬಾ ಜತನದಿಂದ ಕಾಪಾಡಿಕೊಂಡಿದ್ದ ವಸ್ತು ಕಳೆದುಹೋದಾಗ ಆಗುವ ಯಾತನೆಯ ಹಾಗೇ, ಅನುಭವಿಸಲೂ ಆಗದೇ, ಮರೆಯಲೂ ಆಗದೇ ಒದ್ದಾಡುತ್ತಿರುವ ನನ್ನ ಮನದ ಅಳು ನೀನೋಮ್ಮೆ ಕೇಳಬೇಕು ಕಣೇ. ಆ ಅಳು ನಿನಗೆ ಅಳು ತರಿಸದೆ ಇರಬಹುದು, ನನ್ನ ಬಗ್ಗೆ ಪ್ರೀತಿ ಹೆಚ್ಚಿಸದೇ ಹೋಗಬಹುದು ಆದರೆ ಖಂಡಿತ ನನ್ನ ಪ್ರೀತಿಯ ಆಳ ನಿನಗೆ ತಿಳಿಸಿಯೇ ತಿಳಿಸುತ್ತೆ.

ನನ್ನ ಬದುಕಿನೊಳಗೆ ನೀ ಬಂದ ಘಳಿಗೆ ನನಗರಿವಿರಲಿಲ್ಲ , ನೀನು ನನ್ನ ಉಸಿರಾಗುವೆ ಎಂದು. ಅಕಾಲದಲ್ಲಿ ಮಳೆ ಬಂದ ಹಾಗೆ ನಿರೀಕ್ಷೆಯೇ ಇಲ್ಲದ ಹೊತ್ತಲಿ ನೀನು ನನ್ನ ಬದುಕೊಳಗೆ ಸಲೀಸಾಗಿ ನಡೆದುಬಂದೆ, ಅಲ್ಲಿವರೆಗೂ ಸಲೀಸಾಗಿದ್ದ ನನ್ನ ಬದುಕು ನಿನ್ನ ನೆನಪಲಿ ಮತ್ತೊಂದು ಮಜಲಿಗೆ ಮಗ್ಗಲು ಬದಲಾಯಿಸಿಬಿಟ್ಟಿತು. ಅಲ್ಲಿಂದ ನಮ್ಮಿಬ್ಬರ ನಡುವೆ ಸಾಗಿದ್ದು ಬರೀ ಮಾತು ಮತ್ತು ಪ್ರೇಮದ ಗಮ್ಮತ್ತು. ಇವತ್ತಿಗೂ ನನಗೆ ಆಶ್ಚರ್ಯವಾಗೋದು ಯಾಕೆ ಗೊತ್ತಾ..? ಇದುವರೆಗೂ ನನ್ನ ನಿನ್ನ ಪ್ರೇಮಗೀತೆಯಲಿ ಒಂದೇ ಒಂದು ಅಪಸ್ವರವೇಳದಿರುವುದು! ಸಾಮಾನ್ಯವಾಗಿ ಎಲ್ಲ ಪ್ರೇಮಿಗಳ ಮಧ್ಯೆ ಬರೋ ವಿಲನ್ಸ್ ಗಳಾಗಲೀ, ಆಸ್ತಿ-ಅಂತಸ್ತಾಗಲಿ, ಮತ್ತೂ ಉತ್ತಮ ಸಂಗಾತಿ ಸಿಗಬಹುದಿತ್ತು ಎಂಬಂತಹ ಯೋಚನೆಯಾಗಲಿ, ನಮ್ಮೀರ್ವರ ನಡುವೆ ಬಾರದಿರುವುದು!! ಎಂತಹ ಅನ್ಯೋನ್ಯವಾಗಿತ್ತು ಅಲ್ವಾ ನಮ್ಮ ಪ್ರೇಮ?

ಬಹುಶಃ ದೇವರಿಗೆ ಅದೇ ಕಾರಣಕ್ಕೆ ನಮ್ಮ ಮೇಲೆ ಕಿಬ್ಬೊಟ್ಟೆಯ ಸಂಕಟ ಎದುರಾದ ಹಾಗೆ ಆಗಿದೆ. ಅಪಸ್ವರವಿಲ್ಲದ ನಮ್ಮ ಪ್ರೇಮಗೀತೆಗೆ ವಿರಹದ ಚರಣ ಬರೆಯಲು ಹೊರಟಿದ್ದಾನೆ. ಜಾತಿ, ತಂದೆ, ತಾಯಿ ಮತ್ತು ನಮಗೇನು ಮಾಡದ, ಆದರೆ ನಮ್ಮಿಂದ ಎಲ್ಲಾ ಪಡೆಯುವ ಸಮಾಜ ಸನಿಹವಾಯಿತು, ಮದುವೆಮಾತು ದೂರಾವಾಗುವ ಹಾಗಾಯಿತು, ಪ್ರೀತಿಗಾಗಿ ಅಳುವ ಹೃದಯಗಳ ಮೇಲೆ ಜವಾಬ್ದಾರಿಗಳ ಸವಾರಿ. ಎಲ್ಲಾ ವಿಧಿ ಲೀಲೆ..! ನಡೆಯಲಿ ಬಿಡು. ನಿನ್ನ ನೆರಳಾಗುವ ಬಯಕೆಯಲ್ಲಿ ನಿನ್ನ ಗೆಳೆಯನಾಗಿ, ನಿನಗೇನೂ ಆಗದೇ, ತಲೆಯೇರಿ ನಿಂತ ಸೂರ್ಯನ ವರಸೆಗೆ ನನ್ನ ನೆರಳು ನಿನ್ನ ಪಾದ ಸೇರಿಹೋಯಿತಲ್ಲ..!! ಆಗಲೇ ನಾನು ತಟಸ್ಥನಾಗಿಬಿಟ್ಟೆ ಕಣೇ. ನಿನ್ನ ಮರೆಯಲಾರದೇ, ನೀನಿಲ್ಲದೇ ಬದುಕುವುದ ತಿಳಿಯಲಾರದೇ , ಬಾನಿನಾಚೆ ಶೂನ್ಯದ ಕಡೆ ದೃಷ್ಠಿ ನೆಟ್ಟು ಬದುಕಿಗೆ ಭಾರವಾಗಿಬಿಟ್ಟೆ.

ಈಗಲೂ ನಾವು ಮದುವೆಯಾಗೋಣವಾ..? ಎಂದು ನಿನ್ನ ಕೇಳುವಾಸೆ, ಆದರೆ ಅದಾಗದು ಎಂಬುದು ವಾಸ್ತವ. ಇನ್ನು ಮುಂದೆ ನಾನು ತೀರಾ ಒಬ್ಬಂಟಿ. ಆದರೆ ನನ್ನ ಕಾಡಿದಷ್ಟು ನಿನ್ನ ಕಾಡದು ಈ ಒಬ್ಬಂಟಿತನ ಅಲ್ಲವಾ..? ನೀನಾದರೋ ಇನ್ನು ಮುಂದೆ ಸದಾ ಜೊತೆ ಜೊತೆ. ನವದಾಂಪತ್ಯ, ನವೋಲ್ಲಾಸಗಳ ಮಧ್ಯೆ ನನ್ನ ನೆನಪು ನಿನ್ನ ಕಾಡದಿರಬಹುದು. ಕಾಡದಿರಲಿ ಅಂತ ದೇವರಲ್ಲಿ ಬೇಡುವುದೇ ನಾ ನಿನಗೆ ಕೊಡುವ 'ಒಲವಿನ ಉಡುಗೊರೆ'.

4 comments:

  1. ಛೇ........................ ಗೆಳಯಾ ಕೊರಗದಿರು ನೆನಪಲ್ಲಿ
    ಮರುಗದಿರು ನೊವಲ್ಲಿ ಜೀವನಾನೆ ಹಿಗಲ್ಲವಾ
    ಕಾಣದ ಕೈಯ ಲೀಲೆ ಬಲ್ಲೊರು ಯಾರು ಆದರು ನೆನಪೆಂಬ ನಾವೆಯಲಿ ಪಯಣಿಸುವ ನಿಮ್ಮ ಪಯಣದಲಿ ಮುಂದಾದರು ಸಮಾದಾನ ಕೊಡುವ ಒಳ್ಳೇಹ್ರದಯಗಳು ಸಿಗಲಿ..........................................

    ReplyDelete